ಸುರಪುರ ಸಂಸ್ಥಾನದ ಪ್ರಶಸ್ತಿಗಳ ಪ್ರದಾನ | ಮೂರು ಕೃತಿಗಳ ಲೋಕಾರ್ಪಣೆ|ಅಪ್ರತಿಮ ಶೂರರ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ,; ಶಾಸಕ ಆರ್‌ವಿಎನ್ ಅಭಿಮತ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ದೇಶದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಕ್ರಾಂತಿಯ ಕಿಚ್ಚು ಹೊತ್ತಿಸಿದ ಅಪ್ರತಿಮ ವೀರರ, ಶೂರರ ಸಂಸ್ಥಾನವಾಗಿರುವ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿಯ ಅರಮನೆ (ದರ್ಬಾರ) ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುರಪುರ ಸಂಸ್ಥಾನದ ಪ್ರಶಸ್ತಿ ಪ್ರದಾನ ಮತ್ತು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೊಗಲ ಸಾಮ್ರಾಟ ಜೌರಂಗಜೇಬನನ್ನು ಮಣಿಸಿದ, ಆಂಗ್ಲರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದ ಕೀರ್ತಿ ಈ ಸಂಸ್ಥಾನಕ್ಕೆ ಸಲ್ಲುತ್ತದೆ. ನಮ್ಮ ಸಂಸ್ಥಾನದ ಅರಸರು ತಿರುಪತಿ ತಿರುಮಲಾಧೀಶನ ಪರಮ ಭಕ್ತರು ಎಂದು ಹೇಳಲು ಸಂತೋಷವೆನ್ನಿಸುತ್ತದೆ ಎಂದರು.
ಸಂಸ್ಥಾನದ ಅರಸು ವೀರ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಹೋರಾಟ ದೇಶದ ಇತಿಹಾಸದಲ್ಲಿ ಅವಿಸ್ಮರಣೀಯ. ಸುರಪುರ ಸಂಸ್ಥಾನದ ಅರಸರು ಶೌರ್ಯ, ಸಾಹಸದ ಜತೆಗೆ ಕಲೆ, ಸಾಹಿತ್ಯ, ಸಂಗೀತಕ್ಕೆ ಅಪಾರ ಪ್ರೋತ್ಸಾಹ ನೀಡಿದ್ದರು. ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಶ್ರೀಮಂತ ಮತ್ತು ಶ್ರೇಷ್ಠವಾಗಿದೆ. ಬೇರೆ ಬೇರೆ ದೇಶಗಳ ಸಹ ನಮ್ಮ ದೇಶದ ಸಂಸ್ಕೃತಿಯನ್ನು ಗೌರವಿಸುತ್ತವೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಪಾಲಿಸಬೇಕು. ಸುರಪುರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಿರುಪತಿ ದೇವಸ್ಥಾನದ ಪೂಜ್ಯರು ಆಗಮಿಸಿರುವುದು ನಮ್ಮ ಅದೃಷ್ಟವೇ ಸರಿ ಎಂದರು.
ಆನೆಗುಂದಿ ಸಂಸ್ಥಾನ, ವಿಜಯನಗರ ಸಾಮ್ರಾಜ್ಯದ ಅರವೀಡು ಮನೆತನದ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸುರಪುರ ಸಂಸ್ಥಾನದ ಅರಸರ ಆಡಳಿತ, ನೂರಾರು ವರ್ಷಗಳ ಇಲ್ಲಿಯ ಕೋಟೆ, ಕೊತ್ತಲುಗಳು, ಐತಿಹಾಸಿಕ ಸ್ಮಾರಕಗಳನ್ನು ನೋಡಿ ಆನಂದವಾಯಿತು. ನಮ್ಮ ನೆಲದ ಇತಿಹಾಸ ತಿಳಿದು, ಮುಂದಿನ ಪೀಳಿಗೆಗೆ ತಿಳಿಸುವುದು ಮತ್ತು ಸ್ಮಾರಕಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ನಮ್ಮ ದೇಶದ ರಾಜ ಮಹಾರಾಜರ ಇತಿಹಾಸ ಪ್ರೀತಿಸಬೇಕು. ದೇಶದ ಸಂಸ್ಕೃತಿ, ಪದ್ಧತಿಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಅದನ್ನು ನೋಡಿ ನಮ್ಮ ಮಕ್ಕಳು ಪಾಲಿಸುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಗುಣಗಳ ಭದ್ರ ಬುನಾದಿ ಹಾಕಬೇಕು. ಪಾಶ್ವಾತ್ಯ ಸಂಸ್ಕೃತಿ ಅನುಕರಣೆ ಬೇಡ. ಭಾರತ ದೇಶ ನಮ್ಮದು, ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ನಮ್ಮ ದೇಶ ಬೆಳೆಯಬೇಕು, ಹೆತ್ತವರನ್ನು, ಗುರು ಹಿರಿಯರನ್ನು ಗೌರವಿಸಬೇಕು. ನಮ್ಮ ಧರ್ಮ ಉಳಿಯಬೇಕು ಎಂದರು.
ರಾಜಾ ಸುರಪುರದ ವೆಂಕಟಪ್ಪ ನಾಯಕ, ಸುರಪುರ ಸಂಸ್ಥಾನದ ಕೈಪಿಡಿ, ತಂದೆ ತಾಯಿಯರ ಋಣ ಸೇರಿ ಮೂರು ಕೃತಿಗಳ ಲೋಕಾರ್ಪಣೆ ಜರುಗಿತು. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ದರಾಮ ಹೊನ್ಕಲ್, ಡಾ.ಆರ್.ಬಿ.ಚಿಲುಮಿ, ಡಾ.ಲಕ್ಷö್ಮಣ ಎಸ್.ಚೌರಿ ಕೃತಿ ಪರಿಚಯ ಮಾಡಿದರು. ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ.ಪೋತೆ ಮತ್ತು ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿದರು. ಸುರಪುರ ಸಂಸ್ಥಾನದ ನಾನಾ ಪ್ರಶಸ್ತಿಗಳನ್ನು ೧೮ ಜನರಿಗೆ ಪ್ರದಾನ ಮಾಡಲಾಯಿತು. ತಿರುಪತಿ ತಿರುಮಲ ದೇವಸ್ಥಾನದ ಪರಾಂಕುಶಂ ಸೀತಾರಾಮಾಚಾರ್ಯಲು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಥಾನದ ಅರಸು ಡಾ.ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲುಶ್ರೀ ನಾರಾಯಣಪುರ ಪ್ರಾರ್ಥನೆ ಗೀತೆ ಹಾಡಿದರು, ಶಿವಕುಮಾರ ಮಸ್ಕಿ ಸ್ವಾಗತಿಸಿದರು. ವಿಜಯ ರಾಘವನ್ ನಿರೂಪಿಸಿದರು. ಜಾವೀದ್ ಹುಸೇನ್ ಹವಲ್ದಾರ್ ವಂದಿಸಿದರು.




ವಿವಿಧ ಪ್ರಶಸ್ತಿಗಳ ಪ್ರದಾನ
ಅರ್ಚಕಂ ಪರಾಂಕುಶಂ ಸೀತಾರಾಮಾಚಾರ್ಯಲು, ಡಾ.ಬಿ.ಎಲ್.ವೇಣು, ಡಾ.ಎಚ್.ಟಿ. ಪೋತೆ, ಡಾ.ಲಕ್ಷೀಕಾಂತ ವಿ.ಮೊಹರೀರಗೆ ಗೌರವ ಪ್ರಶಸ್ತಿ. ಪಿ.ಶ್ಯಾಮಸುಂದರ, ಶ್ರೀನಿವಾಸ ಜಾಲವಾದಿ, ಭೀಮಣ್ಣ ಬೋನಾಳ, ಮಹಿಪಾಲರೆಡ್ಡಿ ಮುನ್ನೂರು, ಅಶೋಕ ಸಾಲವಾಡಗಿ, ಡಾ.ರಮೇಶ ನಾಯಕ, ಪ್ರಶಾಂತ ಅಸ್ಕ್ ಮೈಸೂರು, ಧಮೇಂದ್ರ ಕುಮಾರ ಅರೇನಹಳ್ಳಿ, ಶಕೀಲ್.ಐ.ಎಸ್.ಶಿವರಾಜ ಶಾಸ್ತಿç, ಡಾ.ಎಂ.ಎಸ್.ಶಿರವಾಳ ಜೆ.ಯೋಗಾನಂದ ಜೋಗಿನ ಕಟ್ಟಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ. ಡಾ.ಶೈಲಜಾ ಎನ್.ಬಾಗೇವಾಡಿ, ಡಾ.ಪರವಿನ್ ಸುಲ್ತಾನ್‌ಗೆ ರಾಜ ಮಾತೆ ರಾಣಿ ಈಶ್ವರಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ವಿಜಯ ಹಾಗರಗುಂಡಗಿ, ಕೇದಾರನಾಥ ಶಾಸ್ತಿç, ರಾಮು ನಾಯಕ ಸುಬೇದಾರ, ವಿಜಯಲಕ್ಷ್ಮೀ ಬಿರಾದಾರ, ಶಶಿಕಲಾ ಮಾಮಾಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಪ್ರತಿಷ್ಠಾನಗಳು ಸ್ಥಾಪನೆಯಾಗಬೇಕು :
ಕಲ್ಯಾಣ ಕರ್ನಾಟಕದಲ್ಲಿ ಇದುವರೆಗೂ ಸರಕಾರದ ಒಂದೇ ಒಂದು ಪ್ರತಿಷ್ಠಾನವು ಇಲ್ಲ ಎನ್ನುವುದು ನೋವಿನ ಸಂಗತಿ. ಬಹುತೇಕ ಎಲ್ಲ ಸಾಹಿತ್ಯ ಪ್ರಕಾರಗಳು ಇಲ್ಲಿಯೇ ಹುಟ್ಟಿವೆ. ಕನ್ನಡ ನಾಡು, ನುಡಿಗೆ ದೊಡ್ಡ ಕಾಣಿಕೆ ಕೊಟ್ಟಿರುವ ಪ್ರದೇಶ. ರಸ್ತೆ, ಕಟ್ಟಡ ನಿರ್ಮಾಣ ಸಾಕಷ್ಟು ಅನುದಾನ ಬರುತ್ತದೆ ಆದರೆ ಸಾಹಿತ್ಯ, ಸಂಸ್ಕçತಿಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಯಾವುದೇ ಕೆಲಸವಾಗುತ್ತಿಲ್ಲ. ಕೆಕೆಡಿಬಿ ಅನುದಾನದಲ್ಲಿ ಒಂದೊಂದು ಪ್ರತಿಷ್ಠಾನ ಮಾಡಿ ಅಧ್ಯಯನ ನಡೆಯಬೇಕು ಮತ್ತು ಪ್ರಶಸ್ತಿ ಕೊಡುವ ಕೆಲಸವಾಗಬೇಕು. ಶಾಸಕರು ಸರಕಾರದ ಗಮನಕ್ಕೆ ತರಬೇಕು. ಸುರಪುರ ಇತಿಹಾಸ ಮರು ಮುದ್ರಣ ಮಾಡಿ ಸಂಪುಟ ರೂಪದಲ್ಲಿ ತಂದು ಜನರಿಗೆ ತಲುಪಿಸಬೇಕು. ಸಾಹಿತ್ಯ, ಸಂಸ್ಕçತಿ ಉಳಿಸಿದರೆ ಅದು ಮುಂದಿನ ಮಕ್ಕಳಿಗೆ ಹಸ್ತಾಂತರ ಮಾಡಲು ಸಾಧ್ಯ. ಸ್ವಾತಂತ್ರö್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ದೇಶಕ್ಕಾಗಿ, ನಾಡಿಗಾಗಿ ತ್ಯಾಗಗೈದ ಸುರಪುರದ ಸಂಸ್ಥಾನದ ಬಗ್ಗೆ ನನಗೆ ಅಪಾರ ಗೌರವವಿದೆ. ತ್ಯಾಗ ಜೀವಿ ರಾಣಿ ಈಶ್ವರಮ್ಮ ತಾಯಿ ಬದುಕನ್ನು ಜೀವನ ಚರಿತ್ರೆಯಾಗಿ ಒಂದು ಪಠ್ಯವಾಗಿ ಮಾಡಲು ಶೀಘ್ರವೇ ತಿರ್ಮಾನಿಸಲಾಗುವುದು ಎಂದು ಗುವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ.ಪೋತೆ ತಿಳಿಸಿದರು.