ಮಹಿಳಾ ಜಗತ್ತಿಗೆ ಅಕ್ಕ ಮಹಾದೇವಿ ಪ್ರೇರಣಾಮಯಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ ; ಕನ್ನಡದ ಪ್ರಥಮ ವಚನಕಾರ್ತಿ, ಕವಯತ್ರಿ ಶಿವಶರಣೆ ಅಕ್ಕಮಹಾದೇವಿ ಬಸವಾದಿ ಶರಣರ ಚಳವಳಿ, ಸಾಮಾಜಿಕ, ಆಧ್ಯಾತ್ಮಿಕ, ಸಾಹಿತ್ಯ ಕ್ಷೇತ್ರದ ಅತ್ಯಂತ ವಿಶಿಷ್ಟ ಅದ್ಭುತ ಬೆಳಕಾಗಿ ಮಹಿಳಾ ಜಗತ್ತಿಗೆ ಅಕ್ಕ ಮಹಾದೇವಿ ಪ್ರೇರಣಾಮಯಿ ಎಂದು ಹಿರೇಸಿಂಗನಗುತ್ತಿಯ ಪ್ರವಚನಕಾರ ದೊಡ್ಡ ಬಸಯ್ಯಶಾಸ್ತ್ರಿ ಹಿರೇಮಠ ಹೇಳಿದರು.


ಇಲ್ಲಿಯ ನಿಷ್ಕ್ರಿ ಕಡ್ಡಪ್ಪನವರ ಮಠದಲ್ಲಿ ಹಮ್ಮಿಕೊಂಡಿರುವ ಶರಣ ಚರಿತಾಮೃತ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕುರಿತು ಪ್ರವಚನ ನೀಡಿದ ಅವರು, ಅಕ್ಕಮಹಾದೇವಿ ಮಹಿಳೆಯರ ಸ್ವಾಭಿಮಾನದ ಪ್ರತೀಕ. ಸ್ತ್ರೀವಾದಿ ಮತ್ತು ಶರಣ ಚಳವಳಿ ಪ್ರತಿಪಾದಕಿ. ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಎಲ್ಲಾ ಬಂಧನಗಳಿಂದ ಬಿಡುಗಡೆಯಾಗಿ ಬಸವಾದಿ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಧೀಮಂತೆ, ದಿಟ್ಟ ಸ್ತ್ರೀ. ಎಲ್ಲಾ ಶರಣರ ಗೌರವಾದರಕ್ಕೆ ಪಾತ್ರಾರಾಗುವ ಮೂಲಕ ಜಗಕ್ಕೆಲ್ಲಾ ಅಕ್ಕ ಎನ್ನಿಸಿಕೊಂಡಳು ಎಂದರು.
ತನ್ನನ್ನು ತಾನು ಚನ್ನಮಲ್ಲಿಕಾರ್ಜುನನಿಗೆ ಅರ್ಪಿಸಿಕೊಂಡ ಅಕ್ಕನ ಭಕ್ತಿ ಅನನ್ಯ. ಉಡುತಡಿಯಿಂದ ಪ್ರಾರಂಭವಾದ ಅವಳ ಚನ್ನಮಲ್ಲಿಕಾರ್ಜುನನ ಹುಡುಕಾಟ ಶ್ರೀಶೈಲದ ಕದಳಿಯಲ್ಲಿ ಚನ್ನಮಲ್ಲಿಕಾರ್ಜುನನ ಪುಣ್ಯಕ್ಷೇತ್ರದಲ್ಲಿ ಕೊನೆಗೊಳ್ಳುತ್ತದೆ. ಅಕ್ಕಮಹಾದೇವಿ ಜೀವನದುದ್ದಕ್ಕೂ ಅತ್ಯಂತ ಕಠಿಣ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಮಹಾನ್ ಶರಣೆ. ಬದುಕಿನಲ್ಲಿ ಕಷ್ಟಗಳು, ನಿಂದೆಗಳು ಸಾಮಾನ್ಯ. ಅವುಗಳಿಗೆ ಹೆದರಿದರೆ ಬದುಕು ಸಾಗಿಸುವುದೇ ಕಷ್ಟವಾದೀತು. ಯಾವುದಕ್ಕೂ ಕೋಪಗೊಳ್ಳದೆ ಸಮಾಧಾನವಾಗಿರಬೇಕು ಎನ್ನುತ್ತಿದ್ದ ಅಕ್ಕನ ಮಾತುಗಳು ಎಂದೆಂದಿಗೂ ಪ್ರಸ್ತುತ ಎಂದರು.
ಸುರಪುರದ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಅರ್ಬನ್ ಬ್ಯಾಂಕ್‌ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರಿಗೆ ಗೌರವ ಸನ್ಮಾನ ನೀಡಲಾಯಿತು. ಪ್ರಭುಲಿಂಗ ಸ್ವಾಮೀಜಿ ಸುರಪುರ ಅರ್ಬನ್ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷ ರಾಜಾ
ವಿಜಯಕುಮಾರ ನಾಯಕ, ಉಪಾಧ್ಯಕ್ಷ ಪಾರಪ್ಪ ಗುತ್ತೇದಾರ, ನಿರ್ದೇಶಕರಾದ ಛಾಯಾ ಕುಂಟೋಜಿ, ನರಸಿಂಹಕಾಂತ ಪಂಚಮಗಿರಿ, ನರೇಶಕುಮಾರ ಜೈನ್, ಯಲ್ಲಪ್ಪ ಹುಲಿಕಲ್, ಅಬ್ದುಲ್ ಗನಿ ಅವರಿಗೆ ಮಠದ ವತಿಯಿಂದ ಗೌರವ ಸನ್ಮಾನ ನೀಡಲಾಯಿತು. ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕಿ ಶಿಲ್ಪಾ ಅವಂಟಿ ಮಾತನಾಡಿದರು. ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣಕುಮಾರ ಯಾಳಗಿ ಮತ್ತು ಶಿವಕುಮಾರ ಕಟ್ಟಿಸಂಗಾವಿ ಸಂಗೀತ ಸೇವೆ ನೀಡಿದರು .