ಏ.20ರ ವರೆಗೆ ಕಾಲುವೆಗೆ ನೀರು ಹರಿಸಿ ರೈತ ಮುಖಂಡ ಶಿವಣ್ಣ ಮಂಗ್ಯಾಳ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ ; ಭತ್ತದ ಫಸಲು ಸಂಪೂರ್ಣವಾಗಿ ರೈತರ ಕೈಗೆ ಬರಬೇಕಾದರೆ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಏ 20 ವರೆಗೆ ನೀರು ಹರಿಸಲೇಬೇಕು ಎಂದು ರೈತ ಮುಖಂಡ ಶಿವಣ್ಣ ಮಂಗ್ಯಾಳ ಒತ್ತಾಯಿಸಿದರು.


ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಮಾರ್ಚ್ 23ಕ್ಕೆ ನೀರು ನಿಲ್ಲಿಸಿದರೆ ಬೆಳೆ ಕೈಗೆ ಬರುವುದಿಲ್ಲ ಎಂದು ಹೇಳಿದರು. ಜಲಾಶಯದಲ್ಲಿ ನೀರು ಇದ್ದು ಕಾಲುವೆಗಳಿಗೆ ನೀರು ಹರಿಸುವುದಿಲ್ಲ ಅಂದರೆ ಇದು ಯಾವ ನ್ಯಾಯ. ನೀರು ಇಲ್ಲದೆ ಇದ್ದರೆ ನಾವ್ಯಾರು ಕೇಳುತ್ತಿರಲಿಲ್ಲ. ಎರಡು ಮೂರು ದಿನಗಳಿಂದ ಜಲಾಶಯಗಳಿಗೆ ಭೇಟಿ ಕೊಟ್ಟು ನೀರಿನ ಲಭ್ಯತೆ ಸಾಕಷ್ಟಿರುವ ಬಗ್ಗೆ ಖಚಿತಪಡಿಸಿ ಕೊಂಡಿದ್ದೇನೆ.
ಈ ಭಾಗದ ರೈತರಿಗೆ ನೀರು ಕೊಡದೆ ರಾತೋರಾತ್ರಿ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು. ರೈತರನ್ನು ಕೇವಲ ಮತ ಹಾಕಲು ಮಾತ್ರ ಸಿಮೀತಗೊಳಿಸಿರುವ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ರೈತರ ಮತಗಳಿಂದ ಗೆದ್ದು ಬಂದಿರುವ ಈ ಭಾಗದ ಶಾಸಕರು, ಸಂಸದರು ರೈತರ ಹಿತಾಸಕ್ತಿ ಕಾಪಾಡದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷವು ಕೂಡಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದು ಬೇಸಿಗೆ ಬೆಳೆಗೆ ನೀರು ಹರಿಸಲಿಲ್ಲ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸದರು. ವಿಜಯಪುರದಲ್ಲಿ ಕಬ್ಬು ಬೆಳೆಯಲು 10 ತಿಂಗಳು ನೀರು ಕೊಡುತ್ತಾರೆ. ನಮಗೆ 8 ತಿಂಗಳಿಮದ ನೀರು ಲಭ್ಯವಿಲ್ಲ. ನೀರಾವರಿ ಸಚಿವರು ತೆಲಾಂಗಣಕ್ಕೆ ನೀರು ಹರಿಸುವ ಜರೂರತ್ತು ಇರಲಿಲ್ಲ. ನಮಗೆ ನೀರಿಲ್ಲದಾಗ ಬೇರೆಯವರಿಗೆ ಹೇಗೆ ಕೊಡುತ್ತಾರೆ ತಿಳಿಯುತ್ತಿಲ್ಲ. ಸರಕಾರ ರೈತರ ಹಿತ ಕಾಪಾಡುತ್ತಿಲ್ಲ. ಅನ್ನದಾತರನ್ನು ಭಕ್ಷಿಸುವ ಕೆಲಸ ಮಾಡುತ್ತದೆ. ನಾವು ಕೇಳುವುದು ನೀರು ಕೊಡಿ ಎಂದು ಮಾತ್ರ. ಕಾರಣ ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ಈ ಕುರಿತು ಕಲ್ಯಾಣ ಕರ್ನಾಟಕ ಭಾಗದ ಶಾಸಕೆರೆಲ್ಲರು ಒಟ್ಟಾಗಿ ಸೇರಿ ಸರಕಾರದ ಮೇಲೆ ಒತ್ತಡ ತಂದು ಏ.20ರ ವರೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದರು.