ಮಹಿಳೆ ಅಬಲೆಯಲ್ಲ ಸಬಲೆ;ಸೋಮರೆಡ್ಡಿ ಮಂಗಿಹಾಳಸ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಹಿಳೆ ಅಬಲೆಯಲ್ಲ ಸಬಲೆ. ಅವಳ ಕೈಯಲ್ಲಿ ಏನೂ ಆಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇಂದು ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿ ಮೇಲುಗೈ ಸಾಧಿಸುತ್ತಾ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ ಎಂದು ಕನ್ಯಾ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ (ದರ್ಬಾರ) ಮುಖ್ಯಗುರು ಸೋಮರೆಡ್ಡಿ ಮಂಗಿಹಾಳ ಹೇಳಿದರು.
ನಗರದ ದರ್ಬಾರ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಪುರಷರಿಗೆ ಸರಿ ಸಮಾನವಾಗಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದಾರೆ. ದೇಶದ ಪ್ರಗತಿ ಮತ್ತು ಸ್ವಾವಲಂಬನೆಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾಗಿದೆ ಎಂದರು.
ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಬಾಳ ಸಂಗಾತಿಯಾಗಿ ,ಪುತ್ರಿಯಾಗಿ ತನ್ನ ಸಂಸಾರದ ನಿರ್ವಹಣೆ ಜೊತೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ವಿಷಯ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ. ಕುಟುಂಬದಿಂದ ಹಿಡಿದು ರಾಷ್ಟ್ರಪತಿವರೆಗೂ ಮಹಿಳೆಯರ ಕೊಡುಗೆ ಅಮೋಘವಾಗಿದೆ ಎಂದು ತಿಳಿಸಿದರು.
ನಮ್ಮ ದೇಶ ಮಾತೃ ಪ್ರಧಾನ, ಸ್ತ್ರೀಯರಿಗೆ ವಿಶೇಷ ಪ್ರಾಮುಖ್ಯತೆ ನೀಡಿರುವ ದೇಶವಾಗಿದೆ. ಮಹಿಳೆ ಕಲಿತರೆ ಒಂದು ಕುಟುಂಬ ಕಲಿತಂತೆ. ಎಲ್ಲಾ ಸ್ತ್ರೀಯರನ್ನು ಪ್ರತಿಯೊಬ್ಬರು ಗೌರವಿಸಬೇಕು. ಮಹಿಳೆಯರು ಎಲ್ಲಿ ಪೂಜಿಸಲ್ಪಡುತ್ತರೋ ಅಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು. ಶಿಕ್ಷಕಿಯರಿಗೆ ಗೌರವ ಸನ್ಮಾನ ನೀಡಲಾಯಿತು. ಶಿಕ್ಷಕರಾದ ಶರಣಯ್ಯ, ಜೋಗಪ್ಪ, ಶರಣು ಪಾಕರೆಡ್ಡಿ, ಗೌರಮ್ಮ, ಸುಜಾತಾ, ಸರಸ್ವತಿ ಸೇರಿ ಅತಿಥಿ ಶಿಕ್ಷಕ, ಶಿಕ್ಷಕಿಯರು ಇದ್ದರು.
