ಸುರಪುರ ಆಸ್ಪತ್ರೆಗೆ ವೈದ್ಯರ ಭರ್ತಿಗೆ ಕ್ರಮ,ತಾಯಿ-ಮಕ್ಕಳ ಆಸ್ಪತ್ರೆ ಆರಂಭಿಸುವುದಾಗಿ ಭರವಸೆ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸುರಪುರ ತಾಲೂಕ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ನೇಮಿಸಿ ಬಳಿಕ ಹೆರಿಗೆ ಪ್ರಕರಣಗಳು ಹೆಚ್ಚಾದ ಮೇಲೆ ತಾಯಿ ಮಕ್ಕಳ ಆಸ್ಪತ್ರೆಯನ್ನು ಮಂಜೂರು ಮಾಡುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.ಪ್ರಶೋತ್ತರ ವೇಳೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಉತ್ತರ ನೀಡಿದ ಅವರು ಸುರಪುರ ಪಟ್ಟಣದಲ್ಲಿ 100 ಹಾಸಿಗೆಯ ತಾಲೂಕ ಮಟ್ಟದ ಆಸ್ಪತ್ರೆ ಇದೆ. ಈ ಆಸ್ಪತ್ರೆಯಲ್ಲಿ ಪ್ರಸೂತಿ, ನವಜಾತ ಶಿಶುಗಳ ಆರೈಕೆ, ಇನ್ನಿತರ ಸೌಲಭ್ಯಗಳು ಇವೆ. ಆದರೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 100 ಹಾಸಿಗೆಯಲ್ಲಿ ಶೇ.70 ರಷ್ಟು ಹಾಸಿಗೆ ಹೆರಿಗೆ ಪ್ರಕರಣಗಳಿಗೆ ಭರ್ತಿ ಆಗಬೇಕು. ಆಗ ಮಾತ್ರ ಮಕ್ಕಳ ಆಸ್ಪತ್ರೆ ಮಂಜೂರು ಮಾಡಲು ಸಾಧ್ಯ ಎಂದು ಉತ್ತರಿಸಿದರು.ಈಗಾಗಲೇ ಸುರಪುರಕ್ಕೆ ಸಮೀಪವಿರುವ ಶಹಾಪುರ ಮತ್ತು ದೇವದುರ್ಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಿದ್ದು, ಅಗತ್ಯ ಬಿದ್ದರೆ ಅಲ್ಲಿ ಚಿಕಿತ್ಸೆಗೆ ಕಳಿಸಬಹುದು. ಜೊತೆಗೆ ಸುರಪುರ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ನೇಮಿಸಲಾಗುವುದು. ಈ ಆಸ್ಪತ್ರೆಯಲ್ಲಿ ಹೆಚ್ಚು ಹೆರಿಗೆ ಪ್ರಕರಣಗಳು ದಾಖಲಾದರೆ ತಾಯಿ-ಮಕ್ಕಳ ಆಸ್ಪತ್ರೆ ಆರಂಭಿಸುವುದಾಗಿ ಭರವಸೆ ನೀಡಿದರು.ಇದಕ್ಕೂ ಮುನ್ನ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮಾತನಾಡಿ ಸುರಪುರ ಪಟ್ಟಣದಲ್ಲಿ ತಾಯಿ-ಮಕ್ಕಳ ಆಸತ್ರೆಯಲ್ಲಿ ಆರಂಭಿಸಬೇಕು. ಸುಮಾರು 135ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರವಾಗಿರುವ ಸದರಿ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಹೆರಿಗೆಗಳಾದರೆ ಚಿಕಿತ್ಸೆ ವ್ಯವಸ್ಥೆ ಇಲ್ಲ. ಕಾರಣ ತಾಯಿ-ಮಕ್ಕಳ ಆಸ್ಪತ್ರೆ ಆರಂಭಿಸಬೇಕು ಮತ್ತು ಅದಕ್ಕೆ ಬೇಕಾದ 8 ಎಕರೆ ಭೂಮಿ ಸಹ ಇದೆ ಎಂದು ತಿಳಿಸಿದರು