ನೀರಿನ ಬಿಲ್ ಹೆಚ್ಚಿಗೆ ವಸೂಲಿ | ಮಾಜಿ ಸಚಿವ ರಾಜುಗೌಡ ಗಂಭೀರ ಆರೋಪ | ನಿರ್ಲಕ್ಷ್ಯಕ್ಕೆ ತಕ್ಕಪಾಠ ಕಲಿಸುವ ಎಚ್ಚರಿಕೆ ,ಬಿಲ್‌ಗಳ ವ್ಯತ್ಯಾಸ ಸರಿಪಡಿಸಲು 2ವಾರ ಗಡುವು !
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನೀರಿನ ಬಿಲ್ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ ಮತ್ತು ಬಿಲ್‌ಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದ್ದು ಸಾರ್ವಜನಿಕರು ಗೋಳಿಡುತ್ತಿದ್ದಾರೆ. ಇನ್ನೂ 2 ವಾರಗಳಲ್ಲಿ ಈ ಅವ್ಯವಸ್ಥೆ ಸರಿಪಡಿಸದೆ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
ನಮ್ಮ ನಳಗಳ ನೀರಿನ ಕರದ ಬಿಲ್ ಹೆಚ್ಚಿಗೆ ಬರುತ್ತಿದೆ. ಅಷ್ಟೊಂದು ದುಡ್ಡು ಎಲ್ಲಿಂದ ತಂದು ಕಟ್ಟಬೇಕು ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಮಾಜಿ ಸಚಿವ ರಾಜುಗೌಡ ಅವರ ಮುಂದೆ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಅವರು ಬುಧವಾರ ದಿಢೀರನೆ ನಗರಸಭೆ ಕಚೇರಿಗೆ ಭೇಟಿ ನೀಡಿ ನೀರಿನ ಕರ ಸಂಬಂಧ ನಗರಸಭೆ ಮತ್ತು ಜಲಮಂಡಳಿ ಅಧಿಕಾರಿಗಳ ಜತೆ ಮಾತನಾಡಿದರು.
ಯಾವ ಆಧಾರದ ಮೇಲೆ ನೀರಿನ ಕರ ನಿಗದಿ ಮಾಡಿದ್ದೀರಿ, ಪ್ರತಿ ಲೀಟರ್ ನೀರು ಬಳಕೆಗೆ ಎಷ್ಟು ಹಣ ಫಿಕ್ಸ್ ಮಾಡಿರುತ್ತೀರಿ, ಮೊದಲ 16 ತಿಂಗಳ ಬಿಲ್ 1920 ರೂ. ಯಾವ ಆಧಾರದ ಮೇಲೆ ಕೊಟ್ಟಿರುತ್ತೀರಿ, ಮೊದಲ ಬಿಲ್ ಎಲ್ಲರಿಗೂ ಒಂದೇ ಕೊಟ್ಟು ಯಾಕೆ ಜನರಿಗೆ ತೊಂದರೆ ಕೊಡುತ್ತಿದ್ದೀರಿ. ಸಾರ್ವಜನಿಕರು ಸಾಮಾನ್ಯವಾಗಿ ಎಷ್ಟೇ ನೀರು ಬಳಕೆ ಮಾಡಿದರೂ ನೂರು ರೂಪಾಯಿ ದಾಟುವುದಿಲ್ಲ. 8 ಸಾವಿರ ಲೀಟರ್ ಒಳಗೆ ಖರ್ಚು ಮಾಡುತ್ತಾರೆ ಅದು 58 ರೂ. ಬರುತ್ತದೆ. ಹೀಗಿರುವಾಗ ಎಲ್ಲರಿಗೂ ಒಂದೇ ಬಿಲ್ ಕೊಟ್ಟರೆ ಹೇಗೆ ಎಂದು ಪ್ರಶ್ನೀಸಿದರು.
ನಿಗಮದಲ್ಲಿ ಮೀಟರ್ ಅಳವಡಿಕೆಗೆ ಹಣ ಇರಲಿಲ್ಲ. ನಾನು ಕೆಕೆಆರ್‌ಡಿಬಿಯಲ್ಲಿಟ್ಟು ಹಾಕಿಸಿರುವೆ. 5 ವರ್ಷ ನಿಗಮದ ನಿರ್ವಹಣೆ ಇರುತ್ತದೆ. 5 ವರ್ಷ ಸುರಪುರ ಜನತೆ ಕುಡಿವ ನೀರು ಉಚಿತವಾಗಿ ಕೊಡಬೇಕು ಎಂಬ ಉದ್ದೇಶದಿಂದ ನಾನು 5 ವರ್ಷ ಗುತ್ತಿಗೆದಾರ್ ಅವರಿಗೆ ನಿರ್ವಹಣೆಗೆ ಸೂಚಿಸಲಾಗಿತ್ತು. ರೀಡರ್‌ಗಳ ತಪ್ಪಿನಿಂದಾಗಿ ಬಿಲ್‌ಗಳಲ್ಲಿ ವ್ಯತ್ಯಾಸ ಬರುತ್ತಿವೆ. ಪ್ರತಿಯೊಂದು ಮನೆಯ ಮೀಟರ್ ಚೆಕ್ ಮಾಡಿ ಬಿಲ್ ಕೊಡಬೇಕು. ನಿಮ್ಮ ಮೈಗಳ್ಳತನಕ್ಕೆ ಎಲ್ಲರಿಗೂ ಯಾಕೆ ಇಂತಹದೊಂದು ಸಮಸ್ಯೆಯೊಡ್ಡಿದ್ದೀರಿ. ನಿಮ್ಮ ನಿರ್ಲಕ್ಷ್ಯದಿಂದ ಬಡವರು ಹೆಚ್ಚು ಹೆಚ್ಚಿಗೆ ದುಡ್ಡು ಕಟ್ಟಬೇಕಾ ಎಂದು ತರಾಟೆಗೆ ತೆಗೆದುಕೊಂಡರು.
ರೀಡರ್‌ಗಳ ಕಣ್ತಪ್ಪಿನಿಂದಾಗಿ ಕೆಲ ಬಿಲ್‌ಗಳು ಲಕ್ಷಗಟ್ಟಲೆ ತೋರಿಸಿ ಆತಂಕವನ್ನುಂಟು ಮಾಡಿವೆ. ಸಾರ್ವಜನಿಕರು ಒಂದು ವೇಳೆ ಗ್ರಾಹಕರ ಕೋರ್ಟಿಗೆ ಹೋದರೆ ಪರಿಣಾಮ ಏನಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಯೊಂದು ಮನೆ ಮನೆಗಳ ಮೀಟರ್ ಪರಿಶೀಲಿಸಿ ಬಿಲ್ ಕೊಡಬೇಕು. ಯಾವುದೇ ಕಾರಣಕ್ಕೂ ಬಿಲ್‌ಗಳಲ್ಲಿ ದೋಷ ಕಂಡುಬಂದರೆ ನಾನು ಸಹಿಸುವುದಿಲ್ಲ. ನಗರಸಭೆ ಆಡಳಿತಕ್ಕೂ ನೀರಿನ ಬಿಲ್‌ಗೂ ಯಾವುದೇ ಸಂಬಂಧವಿಲ್ಲ. ನೀರಿನ ಟೆಕ್ಸ್ ಫಿಕ್ಸ್ ಮಾಡುವುದು ನಿಗಮ. ಈ ವಿಷಯದಲ್ಲಿ ನಿಮಗೆ ಎಷ್ಟು ಗೊತ್ತು ಅಷ್ಟೇ ಕೂಡ ನನಗೂ ಗೊತ್ತು ಎಂದು ಜಲಮಂಡಳಿ ಅಧಿಕಾರಿಗೆ ತಿಳಿಸಿದರು.
11700 ಮನೆಗಳ ಮೀಟರ್ ಚೆಕ್ ಮಾಡಿ ಬಿಲ್ ಕೊಡಿ. ಹೆಚ್ಚಿಗೆ ಬಿಲ್ ನೀಡಿ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ಈ ಅವ್ಯವಸ್ಥೆ ಸರಿಪಡಿಸಲು ನಿಮಗೆ ಇನ್ನೂ 2 ವಾರ ಕಾಲಾವಕಾಶ ಕೊಡಲಾಗುವುದು. ಸರಿಪಡಿಸಿಕೊಳ್ಳದೇ ಹೋದಲ್ಲಿ ಎಲ್ಲಾ 31 ವಾರ್ಡ್ಗಳ ಸಾರ್ವಜನಿಕರೊಂದಿಗೆ ನಗರಸಭೆ ಮುಂದೆ ಕಾನೂನು ಪ್ರಕಾರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಲ ಮಂಡಳಿ ಎಇ ಶಂಕರಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮಾತನಾಡಿದರು. ವ್ಯವಸ್ಥಾಪಕ ಯಲ್ಲಪ್ಪ ನಾಯಕ, ನಗರಸಭೆ ವಿರೋಧ ಪಕ್ಷದ ನಾಯಕ, ವೇಣುಮಾಧವ ನಾಯಕ, ನಗರಸಭೆ ಸದಸ್ಯರಾದ ಸೋಮನಾಥ ಡೊಣ್ಣಿಗೇರೆ, ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ್, ಪ್ರಮುಖರಾದ ಪ್ರೊ.ವೇಣುಗೋಪಾಲ ನಾಯಕ ಜೇವರ್ಗಿ, ಶಂಕರ ನಾಯಕ, ಬಸವರಾಜ ಕೊಡೇಕಲ್ ಸೇರಿ ಸಾರ್ವಜನಿಕರು ಇದ್ದರು.
ಬಾಕ್ಸ್
ಬಹಳ ಕಷ್ಟುಪಟ್ಟು ಯೋಜನೆ ತಂದಿರುವೆ
ನಾನು ಒಬ್ಬ ಸಂಪುಟ ದರ್ಜೆ ಸಚಿವನಾಗಿದ್ದವ. ನನ್ನ ಗೌರವ ಕಡಿಮೆಯಾದರೂ ಸರಿಯೇ ನಗರದ ಜನತೆಗೆ ಶಾಶ್ವತ ಕುಡಿಯವ ನೀರು ಕಲ್ಪಿಸಬೇಕು ಎಂಬ ಉದ್ದೇಶದಿಂದ ನಾನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿಗಮದ ಅಧ್ಯಕ್ಷನಾದೆ. ಕುಡಿವ ನೀರಿನ ಮಹತ್ವಾಕಾಂಕ್ಷಿ ಯೋಜನೆ ಇಲ್ಲಿಗೆ ತಂದು 15-20 ದಿವಸಕ್ಕೊಮ್ಮೆ ನೀರು ಪಡೆಯುತ್ತಿದ್ದ ಇಲ್ಲಿಯ ಜನಕ್ಕೆ ಇಂದು ದಿನಾ ನೀರು ಸಿಗುವಂತೆ ಮಾಡಿರುವೆ. ಭಾರತದಲ್ಲಿ ಎಲ್ಲಿ ಇರಲಾರದ ಯೋಜನೆ ಇಲ್ಲಿ ಹಾಕಿ ಮಾಡಲಾಗಿದೆ. ವಿದ್ಯುತ್ ಹೋದರ ಸಹ ಯಂತ್ರಗಳು ಬ್ಯಾಟರ್ ಮೇಲೆ ಓಪನ್ ಇರುತ್ತವೆ. ನಾನು ಶಾಸಕನಾಗಿ ಮುಂದುವರೆದಿದ್ದರೆ 5 ವರ್ಷ ಉಚಿತವಾಗಿ ನೀರು ಕೊಡುತ್ತಿದ್ದೆ. ಈಗ ನೀವು ಮನಸ್ಸಿಗೆ ತಿಳಿದಂತೆ ಬಿಲ್ ಕೊಟ್ಟು ನಾಗರಿಕರು ಹೈರಾಣ ಆಗುವಂತೆ ಮಾಡಿದ್ದೀರಿ. ಬಿಸ್ಲೇರಿ ರೇಟ್ ಹೆಚ್ಚಿದರೆ ಹೇಗೆ. ಇದು ರಾಜುಗೌಡರ ತಂದ ಯೋಜನೆ ಬಿಲ್ ಜಾಸ್ತಿ ಕೊಟ್ಟು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಬೇಕು ಎಂಬ ಉದ್ದೇಶವೇನಾದರೂ ಇದ್ದರೆ ಅದಕ್ಕೆ ನಾನು ಸಹಿಸುವುದಿಲ್ಲ ನಿಮಗೆ ಸೂಕ್ತ ಪಾಠ ಕಲಿಸುತ್ತೇನೆ ಎಂದು ಮಾಜಿ ಸಚಿವ ರಾಜೂಗೌಡ ಸಭೆಯಲ್ಲಿ ಗುಡುಗಿದರು.



