ದಲಿತರ ಮೇಲೆ ದೌರ್ಜನ್ಯ ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ತಾಲೂಕಿನ ಬಾಚಿಮಟ್ಟಿ ಗ್ರಾಮದ ಸವರ್ಣೀಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಾಮೂಹಿಕ ದಲಿತ ಸಂಘಟನೆಗಳ ಒಕ್ಕೂಟದವರು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆಗಳ ಒಕ್ಕೂಟದವರು ಪ್ರತಿಭಟನೆಗೆ ಮುಂಚೆ ನಗರದ ಡಾ.ಬಿ.ಆರ್.ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು. ಗಾಂಧಿ ವೃತ್ತ, ಲಕ್ಷ್ಮೀಶ ಮಾರ್ಗವಾಗಿ ಅರಮನೆ ರಸ್ತೆ ಮೂಲಕ ಡಿವೈಎಸ್‌ಪಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಒಕ್ಕೂಟದ ಮುಖಂಡರು ಮಾತನಾಡಿ, ಬಾಚಿಮಟ್ಟಿ ಗ್ರಾಮದಲ್ಲಿ ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ನಡೆಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು ಇದುವರೆಗೂ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ದೂರಿದರು. ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ದಲಿತರ ಮೇಲೆ ಹಾಕಿರುವ ಸುಳ್ಳು ಪ್ರಕರಣ ಕೈ ಬಿಡಬೇಕು. ನಿರ್ಲಕ್ಷö್ಯ ವಹಿಸಿದಲ್ಲಿ ಏ.೯ ರಂದು ಸುರಪುರ ಬಂದ್ ಕರೆ ಕೊಟ್ಟು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಡಿವೈಎಸ್ಪಿಗೆ ಸಲ್ಲಿಸಿದರು. ಸಂಘಟನೆಗಳ ಮುಖಂಡರಾದ ನಿಂಗಣ್ಣ ಎಂ.ಗೋನಾಲ, ಚಂದ್ರಶೇಖರ ಜಡಿಮರಳ, ಹಣಮಂತಪ್ಪ ಕಾಕರಗಲ್, ಹಣಮಂತ ಕಟ್ಟಿಮನಿ, ಸದಾಶಿವ ಬೊಮ್ಮನಳ್ಳಿ, ತಾಯಪ್ಪ ಕಟ್ಟಿಮನಿ, ಹಣಮಂತ ಹೊಸಮನಿ, ನಾಗರಾಜ ಓಕಳಿ, ಮಾನಪ್ಪ ಶೆಳ್ಳಗಿ, ಬಸವರಾಜ ನಾಟೇಕರ್, ರಾಜು ದೊಡ್ಮನಿ, ಹೆಚ್.ಆರ್.ಬಡಿಗೇರ, ರಾಮಪ್ಪ ಕೋರೆ. ಮಲ್ಲಪ್ಪ ಕೋಟೆ, ಗೋಪಾಲ ಗೋಗಿಕೇರಾ, ಶಿವಣ್ಣ ನಾಗರಾಳ, ನಿಂಗಪ್ಪ ಕನ್ನೆಳ್ಳಿ, ಭೀಮಣ್ಣ ಅಡ್ಡೋಡಗಿ ಸೇರಿ ಅನೇಕರು ಉಪಸ್ಥಿತರಿದ್ದರು.
