ಕಾಲುವೆಗೆ ನೀರು ಹರಿಸಲು ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಒತ್ತಾಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಬಸವಸಾಗರ ಜಲಾಶಯದಿಂದ ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಏಪ್ರೀಲ್ 15ರವರೆಗೆ ನೀರು ಹರಿಸುವಂತೆ ಲಕ್ಷ್ಮೀಪರದ ಶ್ರೀ ಗಿರಿ ಸಂಸ್ಥಾನ ಪೀಠಾಧಿಪತಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರು ಹರಿಸದಿದ್ದಲ್ಲಿ ಸುಮಾರು 60-80 ಸಾವಿರ ಹೇಕ್ಟರ್ ಪ್ರದೇಶದ ಬೆಳೆ ಹಾನಿಯಾಗಲಿದ್ದು, ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ತಡ ಮಾಡದೆ ಕಾಲುವೆಗಳಿಗೆ ನೀರು ಹರಿಸಬೇಕು. ಈಗಾಗಲೇ ಶಹಾಪುರ ಮತ್ತು ಸುರಪುರ ರೈತರೊಂದಿಗೆ ಹೋರಾಟ ಮಾಡಲಾಗಿದು ಇನ್ನೂ ಶ್ರೀ ಮಠದ ಭಕ್ತರೊಂದಿಗೆ ಹೋರಾಟ ಮಾಡಲು ಸಿದ್ಧ ಎಂದು ಪೂಜ್ಯರು ತಿಳಿಸಿದ್ದಾರೆ. ಪ್ರತಿ ವರ್ಷವೂ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ನೀರಿಗಾಗಿ ರೈತಪರ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದರೂ ಸರಕಾರ ಮಾತ್ರ ನೀರು ಹರಿಸಲು ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರವಾಗಿದ್ದು, ಕೂಡಲೆ ರಾಜ್ಯ ಸರಕಾರ ಈ ಕುರಿತು ಪರಿಶೀಲನೆ ನಡೆಸಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
